Dailyhunt Logo
  • Light mode
    Follow system
    Dark mode
    • Play Story
    • App Story
ಅಡುಗೆ ಮನೆಗೆ ತಟ್ಟಲಿದೆ ಪ್ರಶಾಂತ ಸಾಗರದ ಬಿಸಿ: ಅಕ್ಕಿ, ಸಕ್ಕರೆ, ಎಣ್ಣೆ ದುಬಾರಿ!

ಅಡುಗೆ ಮನೆಗೆ ತಟ್ಟಲಿದೆ ಪ್ರಶಾಂತ ಸಾಗರದ ಬಿಸಿ: ಅಕ್ಕಿ, ಸಕ್ಕರೆ, ಎಣ್ಣೆ ದುಬಾರಿ!

ತಿಂಗಳಿಗೆ ಬೇಕಾದ ದಿನಸಿ ಪದಾರ್ಥಗಳನ್ನು ಖರೀದಿಸಿ ಬಿಲ್ಲಿಂಗ್ ಕೌಂಟರ್‌ನಲ್ಲಿ ನಿಂತಿದ್ದೀರಿ ಎಂದು ಊಹಿಸಿ. ಬಿಲ್ ಕೈಗೆ ಬಂದ ತಕ್ಷಣ ಒಂದು ಕ್ಷಣ ಮತ್ತೆ ಅದನ್ನು ಗಮನಿಸುತ್ತೀರಿ. 'ಕಳೆದ ತಿಂಗಳು ಇದೇ ವಸ್ತುಗಳಿಗೆ ಇಷ್ಟು ಆಗಿರಲಿಲ್ಲವಲ್ಲ!' ಎಂಬ ಪ್ರಶ್ನೆ ಮನಸ್ಸಿನಲ್ಲಿ ಮೂಡುತ್ತದೆ.

ಯುಎಇ ಮೇಲೆ ಎಲ್ ನಿನೊ ಪ್ರಭಾವ: ಅನಿವಾಸಿಗಳು ತಿಳಿಯಬೇಕಾದ ಪ್ರಮುಖ ಸಂಗತಿಗಳು

ಇದು ನಿಮ್ಮೊಬ್ಬರ ಅನುಭವವಲ್ಲ. ಕಳೆದ ಕೆಲವು ವರ್ಷಗಳಿಂದ ದೇಶದ ಲಕ್ಷಾಂತರ ಕುಟುಂಬಳಿಗೆ ಇದೇ ಅನುಭವ ಆಗಿದೆ. ಒಂದೊಮ್ಮೆ ಅಡುಗೆ ಎಣ್ಣೆಯ ಬೆಲೆ ಏರುತ್ತದೆ. ಮತ್ತೊಮ್ಮೆ ಸಕ್ಕರೆ ದುಬಾರಿಯಾಗುತ್ತದೆ. ಕೆಲವೊಮ್ಮೆ ಕಾಫಿ ಪುಡಿ, ಚಾಕೊಲೇಟ್, ಬಿಸ್ಕತ್ತು, ಅಕ್ಕಿ... ಹೀಗೆ ಒಂದಲ್ಲ ಒಂದು ಅಗತ್ಯ ವಸ್ತುವಿನ ಬೆಲೆ ಏರಿಕೆಯಾಗುತ್ತಲೇ ಇರುತ್ತದೆ. ತಿಂಗಳ ಕೊನೆಯಲ್ಲಿ ಮನೆಯ ಖರ್ಚಿನ ಲೆಕ್ಕ ಹಾಕುವಾಗ, ದಿನಸಿ ಬಿಲ್ ನಿಧಾನವಾಗಿ ದೊಡ್ಡ ಹೊರೆ ಆಗುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ.

ಪ್ರತಿ ಬಾರಿ ಇದಕ್ಕೆ ಕಾರಣ ಬೇರೆ. ಒಮ್ಮೆ ಕೋವಿಡ್‌, ಆಮೇಲೆ ಉಕ್ರೇನ್ ಯುದ್ಧ, ನಂತರ ಇಂಧನ ಬೆಲೆ, ಮತ್ತೆ ಹಡಗು ಸಾಗಣೆ ವೆಚ್ಚ, ಈಗ ಇರಾನ್ ಯುದ್ಧ…

ಇದರ ಜೊತೆಗೆ ಅರ್ಥಶಾಸ್ತ್ರಜ್ಞರು ಈಗ ಮತ್ತೊಂದು ಕಾರಣದ ಬಗ್ಗೆಯೂ ಮಾತನಾಡುತ್ತಿದ್ದಾರೆ. ಅದು ಸಾವಿರಾರು ಕಿಲೋಮೀಟರ್ ದೂರದ ಪ್ರಶಾಂತ ಮಹಾಸಾಗರದಲ್ಲಿ ರೂಪುಗೊಳ್ಳುತ್ತಿರುವ ಒಂದು ಹವಾಮಾನ ಚಕ್ರ. ಅದರ ಹೆಸರು 'ಎಲ್ ನಿನೊ'.

ಅದು ಈ ಬಾರಿ ಅತ್ಯಂತ ಪ್ರಬಲ ರೂಪ ಪಡೆದಿದ್ದು, ಆಹಾರ ಬೆಲೆ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಅದರ ಪರಿಣಾಮ 2028ರವರೆಗೂ ಮುಂದುವರಿಯಬಹುದು ಎಂದು ಕೆಲವು ಜಾಗತಿಕ ಹಣಕಾಸು ಸಂಸ್ಥೆಗಳು ಹಾಗೂ ಹವಾಮಾನ ವಿಶ್ಲೇಷಕರು ಎಚ್ಚರಿಸಿದ್ದಾರೆ.

ಮಾನವ ಇತಿಹಾಸವನ್ನೇ ಬದಲಿಸಿದ್ದ ಎಲ್ ನಿನೊ! ಕಾದಿದೆಯಾ ಮಹಾ ವಿಪತ್ತು?

ದಿನಸಿ ಬಿಲ್‌ಗೆ ಜಾಗತಿಕ ನಂಟು

ಒಂದು ಕಿಲೋ ಅಕ್ಕಿಯ ಬೆಲೆಯನ್ನು ನಿರ್ಧರಿಸುವುದು ಯಾರು? ರೈತನೋ? ವ್ಯಾಪಾರಿಯೋ? ಸರ್ಕಾರವೋ? ಅಥವಾ ಮಳೆಯೋ?

ಉತ್ತರ ಇವೆಲ್ಲವೂ. ಆದರೆ ಇಂದಿನ ಜಗತ್ತಿನಲ್ಲಿ ಈ ಪಟ್ಟಿಗೆ ಇನ್ನೊಂದು ಪ್ರಮುಖ ಅಂಶ ಸೇರಿದೆ. 'ಜಾಗತಿಕ ಹವಾಮಾನ'.

ಇಂದು ನಮ್ಮ ಅಡುಗೆ ಮನೆಯಲ್ಲಿರುವ ಅಕ್ಕಿ, ಸಕ್ಕರೆ, ಅಡುಗೆ ಎಣ್ಣೆ, ಕಾಫಿ ಅಥವಾ ಚಾಕೊಲೇಟ್‌ನ ಬೆಲೆ ಕೇವಲ ಭಾರತದ ಕೃಷಿಯ ಮೇಲೆ ಮಾತ್ರ ಅವಲಂಬಿತವಾಗಿಲ್ಲ. ಬ್ರೆಜಿಲ್‌ನಲ್ಲಿ ಕಾಫಿ ಬೆಳೆ ಹೇಗಿದೆ, ಇಂಡೋನೇಷ್ಯಾ ಮತ್ತು ಮಲೇಷ್ಯಾದಲ್ಲಿ ತಾಳೆ ಎಣ್ಣೆ ಉತ್ಪಾದನೆ ಎಷ್ಟಿದೆ, ವಿಯೆಟ್ನಾಂನಲ್ಲಿ ಬರ ಇದೆಯೇ, ಅಮೆರಿಕದಲ್ಲಿ ಜೋಳ ಮತ್ತು ಸೋಯಾಬೀನ್ ಬೆಳೆ ಹೇಗಿದೆ-ಇವೆಲ್ಲವೂ ನಮ್ಮ ದಿನಸಿ ಬಿಲ್‌ನಲ್ಲಿ ಪ್ರತಿಫಲಿಸುತ್ತದೆ. ಜಾಗತಿಕ ಆಹಾರ ಮಾರುಕಟ್ಟೆ ಇಂದು ಅಷ್ಟು ಪರಸ್ಪರ ಅವಲಂಬಿತವಾಗಿದೆ ಎಂಬುದು ಇದರ ಅರ್ಥ.

ಒಂದು ಖಂಡದಲ್ಲಿ ಉಂಟಾಗುವ ಹವಾಮಾನ ವೈಪರೀತ್ಯ, ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಮತ್ತೊಂದು ದೇಶದ ಗ್ರಾಹಕರ ಖರ್ಚಿನ ಮೇಲೂ ಪರಿಣಾಮ ಬೀರುತ್ತದೆ. ಇಂತಹ ಸಂದರ್ಭದಲ್ಲಿ ಮತ್ತೆ ಸುದ್ದಿಯಾಗುತ್ತಿರುವ ಪದವೇ 'ಸೂಪರ್' ಎಲ್ ನಿನೊ.

ಹೊರ್ಮುಜ್ ವಿಚಾರದಲ್ಲಿ ಟ್ರಂಪ್ ಯೂ-ಟರ್ನ್: ಮತ್ತೆ ಆತಂಕದಲ್ಲಿ ಜಾಗತಿಕ ಉದ್ಯಮ

ಯುದ್ಧದ ಮಧ್ಯೆಯೇ ಪ್ರಕೃತಿಯ ಸರದಿ?

2022ರಲ್ಲಿ ಉಕ್ರೇನ್ ಯುದ್ಧ ಆರಂಭವಾದಾಗ ಅದರ ಮೊದಲ ಹೊಡೆತ ಗಡಿಯಲ್ಲಷ್ಟೇ ಕಾಣಿಸಲಿಲ್ಲ; ಜಗತ್ತಿನ ಆಹಾರ ಮಾರುಕಟ್ಟೆಯ ಮೇಲೂ ಬಿತ್ತು.

ಉಕ್ರೇನ್ ಮತ್ತು ರಷ್ಯಾ ಗೋಧಿ, ಜೋಳ ಹಾಗೂ ರಸಗೊಬ್ಬರದ ಪ್ರಮುಖ ಪೂರೈಕೆದಾರ ರಾಷ್ಟ್ರಗಳು. ಯುದ್ಧದ ಪರಿಣಾಮವಾಗಿ ಧಾನ್ಯ ರಫ್ತು ಅಡಚಣೆಯಾಯಿತು, ರಸಗೊಬ್ಬರ ದುಬಾರಿಯಾಯಿತು ಮತ್ತು ಜಾಗತಿಕ ಆಹಾರ ಸರಪಳಿ ಅಸ್ತವ್ಯಸ್ತಗೊಂಡಿತು. ನಂತರ ಕೆಂಪು ಸಮುದ್ರದಲ್ಲಿ ವಾಣಿಜ್ಯ ಹಡಗುಗಳ ಮೇಲಿನ ದಾಳಿಗಳು ಸಾಗಣೆ ವೆಚ್ಚವನ್ನು ಮತ್ತಷ್ಟು ಹೆಚ್ಚಿಸಿದವು. ಒಂದು ದೇಶದಲ್ಲಿ ಬೆಳೆಯುವ ಆಹಾರವನ್ನು ಇನ್ನೊಂದು ದೇಶಕ್ಕೆ ತಲುಪಿಸುವುದೇ ದುಬಾರಿಯಾಯಿತು.

ಇದರಿಂದ ಪರಿಸ್ಥಿತಿ ಸಹಜವಾಗುವ ಮೊದಲೇ, ಇತ್ತೀಚಿನ ಇರಾನ್ ಸಂಘರ್ಷವು ಇಂಧನ ಮಾರುಕಟ್ಟೆಯ ಮೇಲೆ ಹೊಸ ಒತ್ತಡ ತಂದಿಟ್ಟಿದೆ. ಡೀಸೆಲ್, ನೈಸರ್ಗಿಕ ಅನಿಲ ಮತ್ತು ರಸಗೊಬ್ಬರದ ವೆಚ್ಚ ಏರಿದರೆ ಅದರ ನೇರ ಪರಿಣಾಮ ಕೃಷಿ ಉತ್ಪಾದನೆಯ ಮೇಲೂ ಬೀಳುತ್ತದೆ. ರೈತನ ಉತ್ಪಾದನಾ ವೆಚ್ಚ ಹೆಚ್ಚಿದರೆ, ಅದರ ಪ್ರತಿಫಲ ಕೊನೆಗೆ ಗ್ರಾಹಕರ ದಿನಸಿ ಬಿಲ್‌ನಲ್ಲಿಯೂ ಕಾಣಿಸಿಕೊಳ್ಳುತ್ತದೆ.

ಅಂದರೆ, ಜಾಗತಿಕ ಆಹಾರ ವ್ಯವಸ್ಥೆ ಇನ್ನೂ ಒಂದು ಬಿಕ್ಕಟ್ಟಿನಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಮೊದಲೇ ಮತ್ತೊಂದು ಸವಾಲಿನ ಎದುರು ನಿಂತಿದೆ.

ಈ ಹಂತದಲ್ಲೇ 'ಸೂಪರ್' ಎಲ್ ನಿನೊ ರೂಪುಗೊಂಡರೆ ಪರಿಸ್ಥಿತಿ ಇನ್ನಷ್ಟು ಸಂಕೀರ್ಣವಾಗಬಹುದು. ಒಂದೆಡೆ ಯುದ್ಧದಿಂದ ಇಂಧನ, ರಸಗೊಬ್ಬರ ಮತ್ತು ಸಾಗಣೆ ವೆಚ್ಚ ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ಹವಾಮಾನ ವೈಪರೀತ್ಯದಿಂದ ಬೆಳೆ ಉತ್ಪಾದನೆ ಕುಸಿಯುವ ಅಪಾಯವಿದೆ.

ಅರ್ಥಶಾಸ್ತ್ರಜ್ಞರು ಇದನ್ನೇ 'Two Shocks at Once'-ಒಂದೇ ಸಮಯದಲ್ಲಿ ಎರಡು ಆಘಾತಗಳು-ಎಂದು ಹೇಳಿದ್ದಾರೆ. ಮೊದಲ ಆಘಾತ ಮನುಷ್ಯ ಸೃಷ್ಟಿಸಿದ ಯುದ್ಧದಿಂದ, ಎರಡನೆಯದು ಪ್ರಕೃತಿಯ ಹವಾಮಾನ ಚಕ್ರದಿಂದ. ಈ ಎರಡೂ ಒಂದೇ ವೇಳೆ ಆಹಾರ ವ್ಯವಸ್ಥೆಗೆ ಹೊಡೆತ ನೀಡಿದರೆ, ಅದರ ಪರಿಣಾಮ ಜಗತ್ತಿನ ಆಹಾರ ಬೆಲೆ ಮತ್ತು ಹಣದುಬ್ಬರದ ಮೇಲೆ ಇನ್ನಷ್ಟು ತೀವ್ರವಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಭೂಮಿಗಿಂತ ಮೊದಲೇ ಬಾಹ್ಯಾಕಾಶದಲ್ಲಿ ಸಕ್ಕರೆ ಇತ್ತೇ? ಹೊಸ ಸಂಶೋಧನೆಯಲ್ಲಿ ಸುಳಿವು

ಎಲ್ ನಿನೊ ಎಂದರೆ ಏನು?

ಭೂಮಿಯ ಹವಾಮಾನವನ್ನು ಕೇವಲ ಮೋಡ ಮತ್ತು ಗಾಳಿಯಷ್ಟೇ ನಿಯಂತ್ರಿಸುವುದಿಲ್ಲ. ಸಮುದ್ರಗಳೂ ಅದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪ್ರಶಾಂತ ಮಹಾಸಾಗರದ ಮಧ್ಯ ಮತ್ತು ಪೂರ್ವ ಭಾಗದ ನೀರು ಕೆಲ ವರ್ಷಗಳಿಗೊಮ್ಮೆ ಸಾಮಾನ್ಯಕ್ಕಿಂತ ಹೆಚ್ಚು ಬಿಸಿಯಾಗುತ್ತದೆ. ಈ ವಿದ್ಯಮಾನವನ್ನೇ 'ಎಲ್ ನಿನೊ' ಎಂದು ಕರೆಯುತ್ತಾರೆ.

ಸಮುದ್ರದ ನೀರು ಬಿಸಿಯಾದಾಗ ಗಾಳಿಯ ಚಲನೆ ಬದಲಾಗುತ್ತದೆ. ಅದರೊಂದಿಗೆ ಮೋಡಗಳು, ಮಳೆಯ ಮಾದರಿ ಮತ್ತು ತಾಪಮಾನದಲ್ಲೂ ಬದಲಾವಣೆ ಉಂಟಾಗುತ್ತದೆ.

ಪರಿಣಾಮವಾಗಿ, ಕೆಲವು ದೇಶಗಳಲ್ಲಿ ಬರ ಕಾಣಿಸಿಕೊಳ್ಳಬಹುದು. ಇನ್ನೂ ಕೆಲವು ಕಡೆ ಭಾರೀ ಮಳೆಯಾಗಿ ಪ್ರವಾಹ ಉಂಟಾಗಬಹುದು. ಭಾರತದಲ್ಲಿ ಮುಂಗಾರಿನ ಮೇಲೆ ಇದರ ಪರಿಣಾಮ ಬೀರಿದ್ದು, ಅದರ ಫಲಿತಾಂಶಗಳು ಈಗ ಕಾಣಿಸುತ್ತಿದೆ.

ಹೊರ್ಮುಜ್‌ನಲ್ಲಿ ಶೇ 20 ಶುಲ್ಕ? ಜಾಗತಿಕ ವ್ಯಾಪಾರಕ್ಕೆ ಹೊಸ ಆರ್ಥಿಕ ಆಘಾತ

'ಸೂಪರ್' ಎಲ್ ನಿನೊ ಎಂದರೆ ಏನು?

ಎಲ್ಲಾ ಎಲ್ ನಿನೊಗಳ ತೀವ್ರತೆ ಒಂದೇ ತೆರೆನದ್ದಲ್ಲ. ಕೆಲವು ದುರ್ಬಲವಾಗಿದ್ದರೆ, ಕೆಲವು ಅತ್ಯಂತ ಪ್ರಬಲವಾಗಿರುತ್ತವೆ. ಈ ಬಾರಿ ಪ್ರಶಾಂತ ಮಹಾಸಾಗರದ ನೀರು ಸಾಮಾನ್ಯಕ್ಕಿಂತ ಹೆಚ್ಚು ಬಿಸಿಯಾಗುವ ಲಕ್ಷಣಗಳು ಕಾಣಿಸುತ್ತಿವೆ ಎಂದು ಅಮೆರಿಕದ ರಾಷ್ಟ್ರೀಯ ಸಾಗರ ಮತ್ತು ವಾತಾವರಣ ಆಡಳಿತ (ಎನ್‌ಒಎಎ) ತಿಳಿಸಿದೆ. ಈ ವರ್ಷದ ಅಂತ್ಯದ ವೇಳೆಗೆ ಸಮುದ್ರದ ಮೇಲ್ಮೈ ತಾಪಮಾನ ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ಏರಿದರೆ, ಅದು ಅತ್ಯಂತ ಪ್ರಬಲ ಎಲ್ ನಿನೊಗಳಲ್ಲಿ ಒಂದಾಗಬಹುದು.

ಇಂತಹ ತೀವ್ರ ಎಲ್ ನಿನೊವನ್ನು ಅಧಿಕೃತವಾಗಿ 'ಸೂಪರ್' ಎಲ್ ನಿನೊ ಎಂದು ವರ್ಗೀಕರಿಸುವುದಿಲ್ಲ. ಆದರೆ ಅದರ ತೀವ್ರತೆಯನ್ನು ವಿವರಿಸಲು ವಿಜ್ಞಾನಿಗಳು ಮತ್ತು ಮಾಧ್ಯಮಗಳು ಅನೌಪಚಾರಿಕವಾಗಿ 'ಸೂಪರ್' ಅಥವಾ 'ಗಾಡ್ಜಿಲ್ಲಾ' ಎಲ್ ನಿನೊ ಎಂಬ ಪದಗಳನ್ನು ಬಳಸುತ್ತಾರೆ. ಅಂದರೆ, 'ಸೂಪರ್' ಎಲ್ ನಿನೊ ಎಂದರೆ ಸಾಮಾನ್ಯ ಎಲ್ ನಿನೊಗಿಂತ ಹೆಚ್ಚು ಪ್ರಬಲವಾದ ಎಲ್ ನಿನೊ ಅಷ್ಟೇ.

ಒಪ್ಪಂದದ ಭಾಷೆಯಲ್ಲೇ ಹೊಸ ಬಿಕ್ಕಟ್ಟು: ಹೊರ್ಮುಜ್ ಈಗ ಜಾಗತಿಕ ಪೈಪೋಟಿಯ ಅಖಾಡ

ಸಮುದ್ರ ಬಿಸಿಯಾಗುವುಕ್ಕೂ ಅಕ್ಕಿಯ ಬೆಲೆಗೂ ಏನು ಸಂಬಂಧ?

ಮೇಲ್ನೋಟಕ್ಕೆ ಈ ಎರಡಕ್ಕೂ ಯಾವುದೇ ಸಂಬಂಧವಿಲ್ಲ ಎಂದನಿಸಬಹುದು. ಪ್ರಶಾಂತ ಮಹಾಸಾಗರದಲ್ಲಿ ನೀರು ಬಿಸಿಯಾದರೆ, ಬೆಂಗಳೂರಿನಲ್ಲಿ ಅಕ್ಕಿಯ ಬೆಲೆ ಏಕೆ ಏರಬೇಕು?

ಆದರೆ ಈ ಕಥೆ ಶುರುವಾಗುವುದು ಸಮುದ್ರದಲ್ಲಿ ಅಲ್ಲ, ರೈತನ ಹೊಲದಲ್ಲಿ. ಒಬ್ಬ ರೈತ ಇಂದು ಬಿತ್ತಿದರೆ, ನಾಳೆಯೇ ಬೆಳೆ ಸಿಗುವುದಿಲ್ಲ. ಸರಿಯಾದ ಸಮಯಕ್ಕೆ ಮಳೆ ಬರಬೇಕು. ಸಾಕಷ್ಟು ನೀರು ಸಿಗಬೇಕು. ಅತಿಯಾದ ಬಿಸಿಲು ಅಥವಾ ಪ್ರವಾಹ ಬರಬಾರದು. ರೋಗಬಾಧೆ ಕಡಿಮೆಯಾಗಿರಬೇಕು. ಹೀಗೆ ಹಲವು ತಿಂಗಳುಗಳ ಆರೈಕೆಯ ಬಳಿಕವೇ ಬೆಳೆ ಕೊಯ್ಲಿಗೆ ಬರುತ್ತದೆ. ಅಲ್ಲಿಂದ ಗೋದಾಮು, ಸಾಗಣೆ, ಸಗಟು ಮಾರುಕಟ್ಟೆ, ಚಿಲ್ಲರೆ ವ್ಯಾಪಾರಿಗಳನ್ನು ದಾಟಿ ಕೊನೆಗೆ ಅದು ಗ್ರಾಹಕರ ಮನೆಯ ಅಡುಗೆ ಮನೆ ತಲುಪುತ್ತದೆ.

ಈ ದೀರ್ಘ ಪ್ರಯಾಣದ ಯಾವುದೇ ಹಂತದಲ್ಲಿ ಹವಾಮಾನ ವೈಪರೀತ್ಯ ಉಂಟಾದರೂ, ಅದರ ಪರಿಣಾಮ ಇಡೀ ಆಹಾರ ಸರಪಳಿಯ ಮೇಲೆ ಬೀಳುತ್ತದೆ.

ಗುರಿ ಬದಲಿಸುವ ಟ್ರಂಪ್, ನಿಲುವು ಸಡಿಲಿಸದ ಪುಟಿನ್: ಯುದ್ಧ ಸಾರಿ ಗೆಲ್ಲದ ನಾಯಕರು

'ಮಳೆ ಕಡಿಮೆಯಾದರೆ ರೈತರಿಗೆ ತೊಂದರೆ' ಎನ್ನುವುದು ನಮಗೆ ಗೊತ್ತಿರುವ ಸರಳ ಲೆಕ್ಕ. ಆದರೆ ಇಂದಿನ ಜಗತ್ತಿನಲ್ಲಿ ಕೃಷಿ ಒಂದು ದೇಶದ ಗಡಿಯೊಳಗೆ ಸೀಮಿತವಾಗಿಲ್ಲ. ಆಹಾರವೂ ಸ್ಥಳೀಯ ಮಾರುಕಟ್ಟೆಗೆ ಮಾತ್ರ ಸೀಮಿತವಾಗಿಲ್ಲ. ಎಲ್ಲವೂ ಜಾಗತಿಕವಾಗಿ ಪರಸ್ಪರ ಜೋಡಿಸಿಕೊಂಡಿವೆ.

ಉದಾಹರಣೆಗೆ, ಭಾರತದಲ್ಲಿ ಅಕ್ಕಿ ಉತ್ಪಾದನೆ ಸ್ವಲ್ಪ ಕಡಿಮೆಯಾದರೆ, ಬೇರೆ ದೇಶಗಳಿಂದ ತರಿಸಿಕೊಳ್ಳಬಹುದು. ಅದೇ ರೀತಿ ಬ್ರೆಜಿಲ್‌ನಲ್ಲಿ ಕಾಫಿ ಬೆಳೆ ಹಾನಿಯಾದರೆ, ವಿಯೆಟ್ನಾಂ ಅಥವಾ ಇತರ ದೇಶಗಳು ಅದರ ಕೊರತೆಯನ್ನು ಸ್ವಲ್ಪ ಮಟ್ಟಿಗೆ ತುಂಬಬಹುದು.

ಆದರೆ, ಒಂದೇ ಸಮಯದಲ್ಲಿ ಭಾರತದಲ್ಲಿ ಮಳೆ ಕೊರತೆ, ಆಗ್ನೇಯ ಏಷ್ಯಾದಲ್ಲಿ ಬರ, ಬ್ರೆಜಿಲ್‌ನಲ್ಲಿ ಅತಿವೃಷ್ಟಿ, ಆಫ್ರಿಕಾದ ಕೆಲವು ಭಾಗಗಳಲ್ಲಿ ತೀವ್ರ ಹವಾಮಾನ ವೈಪರೀತ್ಯ ಉಂಟಾದರೆ? ಆಗ ಒಂದು ದೇಶ ಇನ್ನೊಂದರ ಕೊರತೆಯನ್ನು ತುಂಬುವುದು ಕಷ್ಟವಾಗುತ್ತದೆ. ಪರಿಣಾಮವಾಗಿ ಜಾಗತಿಕ ಆಹಾರ ಉತ್ಪಾದನೆ ಕುಸಿಯುತ್ತದೆ. ಸರಬರಾಜು ಕಡಿಮೆಯಾಗುತ್ತದೆ. ಬೇಡಿಕೆ ಮಾತ್ರ ಹಾಗೆಯೇ ಉಳಿಯುತ್ತದೆ ಅಥವಾ ಏರಿಕೆಯಾಗುತ್ತದೆ. ಆಗ ಮಾರುಕಟ್ಟೆಯಲ್ಲಿ ಆಹಾರ ಬೆಲೆ ಹೆಚ್ಚುತ್ತವೆ.

ಅರ್ಥಶಾಸ್ತ್ರಜ್ಞರು ಇದನ್ನೇ 'ಕ್ಲೈಮೇಟ್‌ಫ್ಲೇಶನ್' (Climateflation) ಎಂದು ಕರೆಯುತ್ತಾರೆ. ಅಂದರೆ, ಹವಾಮಾನ ವೈಪರೀತ್ಯದಿಂದ ಉಂಟಾಗುವ ಹಣದುಬ್ಬರ. ಹಿಂದೆ ಯುದ್ಧ ಅಥವಾ ತೈಲ ಬೆಲೆಗಳು ಹಣದುಬ್ಬರಕ್ಕೆ ಕಾರಣವಾಗುತ್ತಿದ್ದರೆ, ಈಗ ಹವಾಮಾನವೂ ಅದೇ ಮಟ್ಟದ ಆರ್ಥಿಕ ಶಕ್ತಿಯಾಗಿ ಪರಿಣಮಿಸುತ್ತಿದೆ.

ಫಲಿಸದ ಒತ್ತಡ, ಉಳಿಯದ ಒಪ್ಪಂದ...ಇರಾನ್ ಎದುರು ಟ್ರಂಪ್ ಮುಂದಿನ ನಡೆ ಏನು?

2028ರವರೆಗೆ ಪರಿಣಾಮ?

'ಎಲ್ ನಿನೊ 2026-27ರಲ್ಲಿ ಸಂಭವಿಸಿದರೆ, ಅದರ ಪರಿಣಾಮ 2028ರವರೆಗೆ ಹೇಗೆ ಇರುತ್ತದೆ?' ಎಂಬ ಪ್ರಶ್ನೆ ಸಹಜ. ಇದಕ್ಕೆ ಉತ್ತರ ಕೃಷಿಯ ಸ್ವಭಾವದಲ್ಲೇ ಇದೆ. ಇಂದು ಮಳೆ ಕಡಿಮೆಯಾಯಿತು ಎಂದರೆ ನಾಳೆಯೇ ಅಕ್ಕಿಯ ಬೆಲೆ ಏರುವುದಿಲ್ಲ. ಬೆಳೆ ಬೆಳೆಯಲು ಸಮಯ ಬೇಕು. ಕೊಯ್ಲು, ಸಂಗ್ರಹಣೆ, ಸಾಗಣೆ ಮತ್ತು ಮಾರುಕಟ್ಟೆಗೆ ತಲುಪುವ ಪ್ರಕ್ರಿಯೆಯೂ ಹಲವು ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ.

ಒಂದು ಹಂಗಾಮಿನ ಬೆಳೆ ಹಾನಿಯಾದರೆ ಅದರ ಪರಿಣಾಮ ಮುಂದಿನ ಹಂಗಾಮಿನ ಮೇಲೂ ಬೀಳಬಹುದು. ಮೊದಲಿಗೆ ದೇಶಗಳು ತಮ್ಮ ಸಂಗ್ರಹದಲ್ಲಿರುವ ಧಾನ್ಯವನ್ನು ಬಳಸುತ್ತವೆ. ಬಳಿಕ ಕೊರತೆ ಕಾಣಿಸಿಕೊಳ್ಳಲು ಆರಂಭವಾಗುತ್ತದೆ. ಕೆಲವು ರಾಷ್ಟ್ರಗಳು ಆಹಾರ ಭದ್ರತೆಗಾಗಿ ರಫ್ತು ನಿಯಂತ್ರಣ ಹೇರಬಹುದು. ಜಾಗತಿಕ ವ್ಯಾಪಾರವೂ ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ.

ಹೀಗಾಗಿ, ಒಂದು ಹವಾಮಾನ ಘಟನೆ ನಡೆದ ತಕ್ಷಣ ಅದರ ಸಂಪೂರ್ಣ ಆರ್ಥಿಕ ಪರಿಣಾಮ ಗೋಚರಿಸುವುದಿಲ್ಲ. ಅದರ ಅಲೆಗಳು ನಿಧಾನವಾಗಿ ಆಹಾರ ಸರಪಳಿಯ ಮೂಲಕ ಹರಡುತ್ತಾ ಮುಂದಿನ ಎರಡು ವರ್ಷಗಳವರೆಗೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

ಗೋಲ್ಡ್‌ಮನ್ ಸ್ಯಾಕ್ಸ್ ವಿಶ್ಲೇಷಣೆಯ ಪ್ರಕಾರ, ಇದೇ ಕಾರಣದಿಂದ 'ಸೂಪರ್' ಎಲ್ ನಿನೊ ಉಂಟುಮಾಡುವ ಆಹಾರ ಬೆಲೆ ಏರಿಕೆಯ ಸಂಪೂರ್ಣ ಪರಿಣಾಮ 2028ರ ಉತ್ತರಾರ್ಧದಲ್ಲಿ ಹೆಚ್ಚು ಸ್ಪಷ್ಟವಾಗಿ ಕಾಣಿಸಿಕೊಳ್ಳಬಹುದು. ಅವರ ಅಂದಾಜಿನಂತೆ ಜಾಗತಿಕ ಆಹಾರ ಸರಕುಗಳ ಬೆಲೆ ಸುಮಾರು ಶೇ 15.8 ಏರಬಹುದಾದ ಸಾಧ್ಯತೆ ಇದೆ. ಆದರೆ ಇದು ಖಚಿತ ಭವಿಷ್ಯವಾಣಿಯಲ್ಲ; ಲಭ್ಯವಿರುವ ಹವಾಮಾನ ಮತ್ತು ಆರ್ಥಿಕ ಮಾಹಿತಿಯ ಆಧಾರದ ಮೇಲೆ ರೂಪಿಸಲಾದ ಒಂದು ಅಂದಾಜು ಮಾತ್ರ.

ಭಾರತಕ್ಕೆ ಮೇಲೆ ಪರಿಣಾಮ?

ಎಲ್ ನಿನೊ ಭಾರತಕ್ಕೆ ಹೊಸ ವಿದ್ಯಮಾನವೇನಲ್ಲ. ಆದರೆ ಪ್ರತಿಯೊಂದು ಎಲ್ ನಿನೊ ಪರಿಣಾಮ ಭಿನ್ನವಾದುದ್ದು. ಅದರ ತೀವ್ರತೆ, ಮುಂಗಾರಿನ ಮೇಲಿನ ಪರಿಣಾಮ ಮತ್ತು ಬೆಳೆ ಹಂಗಾಮಿನ ಸಮಯವನ್ನು ಅವಲಂಬಿಸಿ ಪರಿಣಾಮ ಬದಲಾಗುತ್ತದೆ.

ಭಾರತದ ಕೃಷಿ ನೈಋತ್ಯ ಮುಂಗಾರನ್ನು ಅವಲಂಬಿಸಿದೆ. ದೇಶದ ವಾರ್ಷಿಕ ಮಳೆಯ ಬಹುಪಾಲು ಜೂನ್‌ನಿಂದ ಸೆಪ್ಟೆಂಬರ್‌ನಲ್ಲಿ ಸುರಿಯುತ್ತದೆ. ಇದೇ ಮಳೆ ಅಕ್ಕಿ, ಕಬ್ಬು, ಕಾಳುಗಳು, ಹತ್ತಿ ಸೇರಿದಂತೆ ಹಲವು ಪ್ರಮುಖ ಬೆಳೆಗಳ ಭವಿಷ್ಯವನ್ನು ನಿರ್ಧರಿಸುತ್ತದೆ.

ಮುಂಗಾರು ದುರ್ಬಲವಾದರೆ ಅಥವಾ ಮಳೆ ಕೊರತೆಯಾದರೆ, ಮೊದಲ ಹೊಡೆತ ಕೃಷಿ ಉತ್ಪಾದನೆಗೆ ಬೀಳುತ್ತದೆ. ಅದರ ಪರಿಣಾಮವಾಗಿ ಮಾರುಕಟ್ಟೆಯಲ್ಲಿ ಆಹಾರ ಧಾನ್ಯಗಳ ಪೂರೈಕೆ ಕಡಿಮೆಯಾಗುವ ಸಾಧ್ಯತೆ ಇದೆ. ಗೋಲ್ಡ್‌ಮನ್ ಸ್ಯಾಕ್ಸ್ ವಿಶ್ಲೇಷಣೆಯ ಪ್ರಕಾರ, ಭಾರತದ ಕೆಲವು ಭಾಗಗಳಲ್ಲಿ ಈಗಾಗಲೇ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಅದು ಅಕ್ಕಿ, ಗೋಧಿ ಮತ್ತು ಕಬ್ಬಿನ ಉತ್ಪಾದನೆ ಕಡಿಮೆಯಾಗಬಹುದು.

ಭಾರತ ಹವಾಮಾನ ಇಲಾಖೆ (ಐಎಂಡಿ) ಕೂಡ ಎಲ್ ನಿನೊ ಪರಿಸ್ಥಿತಿಗಳನ್ನು ನಿರಂತರವಾಗಿ ಗಮನಿಸುತ್ತಿದೆ. ಆದರೆ ಎಲ್ ನಿನೊ ಇದೆ ಎಂದ ಮಾತ್ರಕ್ಕೆ ದೇಶದ ಎಲ್ಲ ಭಾಗಗಳಲ್ಲೂ ಬರವೇ ಆಗುತ್ತದೆ ಎಂದು ಅರ್ಥವಲ್ಲ. ಕೆಲ ರಾಜ್ಯಗಳಲ್ಲಿ ಸಾಮಾನ್ಯ ಮಳೆಯಾಗಬಹುದು, ಮತ್ತೆ ಕೆಲವೆಡೆ ಕೊರತೆ ಕಾಣಿಸಬಹುದು.

ಕ್ರೀಡೆಗೆ ಕಪ್ಪು ಚುಕ್ಕೆಯಾದ ಫುಟ್‌ಬಾಲ್ ಜಗತ್ತಿನ ಐದು ಪ್ರಮುಖ ವಿವಾದಗಳು

ಕರ್ನಾಟಕದ ಮೇಲೆ ಏನು ಪರಿಣಾಮ?

ಕರ್ನಾಟಕದ ಮೇಲೂ ಎಲ್ ನಿನೊ ಪರಿಣಾಮ ಒಂದೇ ರೀತಿಯಲ್ಲಿ ಇರದು. ರಾಜ್ಯದ ವಿವಿಧ ಭಾಗಗಳಲ್ಲಿ ಬೆಳೆಯುವ ಬೆಳೆಗಳು, ಮಳೆಯ ಪ್ರಮಾಣ ಮತ್ತು ನೀರಾವರಿ ವ್ಯವಸ್ಥೆಯನ್ನು ಅವಲಂಬಿಸಿ ಅದರ ಪರಿಣಾಮ ಬದಲಾಗಬಹುದು.

ಮಂಡ್ಯದ ಕಬ್ಬು, "ಕೃಷ್ಣಾ-ತುಂಗಭದ್ರಾ ಕಣಿವೆಯ ಅಕ್ಕಿ, ಉತ್ತರ ಕರ್ನಾಟಕದ ಜೋಳ, ಕೊಡಗು ಮತ್ತು ಚಿಕ್ಕಮಗಳೂರಿನ ಕಾಫಿ-ಈ ಎಲ್ಲ ಬೆಳೆಗಳೂ ಹವಾಮಾನದೊಂದಿಗೆ ನಿಕಟ ಸಂಬಂಧ ಹೊಂದಿವೆ. ಮಳೆ ಸರಿಯಾದ ಸಮಯಕ್ಕೆ ಸುರಿಯದಿದ್ದರೆ ಉತ್ಪಾದನೆ ಕುಂಠಿತವಾಗುತ್ತದೆ.

ಇನ್ನೊಂದೆಡೆ, ಜಾಗತಿಕ ಮಟ್ಟದಲ್ಲಿ ಕಾಫಿ ಉತ್ಪಾದನೆ ಕಡಿಮೆಯಾದರೆ ಅದರ ಬೆಲೆ ಏರಬಹುದು. ಇದರಿಂದ ಕರ್ನಾಟಕದ ಕಾಫಿ ಬೆಳೆಗಾರರಿಗೆ ಉತ್ತಮ ಬೆಲೆ ಸಿಗುವ ಸಾಧ್ಯತೆ ಇದೆ. ಆದರೆ ಅದೇ ಸಮಯದಲ್ಲಿ ರಾಜ್ಯದಲ್ಲಿಯೂ ಹವಾಮಾನ ವೈಪರೀತ್ಯದಿಂದ ಉತ್ಪಾದನೆ ಕುಸಿದರೆ, ಬೆಲೆ ಹೆಚ್ಚಳದ ಲಾಭವೂ ಇಳಿಕೆಯಾಗಬಹುದು.

ಇದರ ಜೊತೆಗೆ ಭಾರತ ಅಡುಗೆ ಎಣ್ಣೆಯ ಅಗತ್ಯದ ಬಹುಪಾಲನ್ನು ಆಮದು ಮಾಡಿಕೊಳ್ಳುತ್ತದೆ. ಇಂಡೋನೇಷ್ಯಾ ಮತ್ತು ಮಲೇಷ್ಯಾದಲ್ಲಿ ತಾಳೆ ಎಣ್ಣೆ ಉತ್ಪಾದನೆ ಎಲ್ ನಿನೊದಿಂದ ಸಮಸ್ಯೆಗೀಡಾದರೆ, ಅದರ ಪರಿಣಾಮ ಭಾರತೀಯ ಮಾರುಕಟ್ಟೆಯ ಮೇಲೂ ಬೀಳಬಹುದು. ಅಡುಗೆ ಎಣ್ಣೆ ಸೇರಿದಂತೆ ಹಲವು ದಿನಸಿ ವಸ್ತುಗಳ ಬೆಲೆ ಏರಿಕೆಯಾಗುತ್ತದೆ.

ಅಂದರೆ, ಎಲ್ ನಿನೋದಿಂದ ಕೆಲವು ಬೆಳೆಗಳಿಗೆ ಉತ್ತಮ ಬೆಲೆ ಸಿಗುವ ಸಾಧ್ಯತೆ ಇದ್ದರೂ, ಮನೆಯ ದಿನಸಿ ವೆಚ್ಚ ಹೆಚ್ಚಾಗುವ ಅಪಾಯವೂ ಇದೆ. ಹೀಗಾಗಿ ಈ ಹವಾಮಾನ ಬದಲಾವಣೆಯ ಪರಿಣಾಮ ರೈತರ ಹೊಲದಿಂದ ಹಿಡಿದು ಹಳ್ಳಿಯ ಅಡುಗೆ ಮನೆಯವರೆಗೆ ತಲುಪುತ್ತದೆ.

ಖಮೇನಿ ಅಂತಿಮ ಯಾತ್ರೆ: ಯುದ್ಧದ ಪರಿಣಾಮ, ಸಾಮಾಜಿಕ ಬದುಕಿನ ವಿಭಿನ್ನ ಚಿತ್ರಣಗಳು

ಯಾವ ಆಹಾರಗಳ ಬೆಲೆ ಏರಿಕೆಯಾಗಬಹುದು?

ವಿಶ್ಲೇಷಕರ ಪ್ರಕಾರ, ಅಕ್ಕಿ, ಸಕ್ಕರೆ, ತಾಳೆ ಎಣ್ಣೆ, ಕಾಫಿ, ಕೊಕೊ, ಜೋಳ ಮತ್ತು ಸೋಯಾಬೀನ್ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಇವುಗಳಲ್ಲಿ ಕೆಲವು ನಮ್ಮ ಅಡುಗೆ ಮನೆಯ ಅವಿಭಾಜ್ಯ ಭಾಗಗಳಾಗಿದ್ದರೆ, ಇನ್ನು ಕೆಲವು ಅಡುಗೆ ಎಣ್ಣೆ, ಬಿಸ್ಕತ್ತು, ಚಾಕೊಲೇಟ್, ಪಶು ಆಹಾರ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ತಯಾರಿಕೆಯಲ್ಲಿ ಪ್ರಮುಖ ಕಚ್ಚಾ ವಸ್ತುಗಳಾಗಿವೆ.

ಹೀಗಾಗಿ, ಎಲ್ ನಿನೊ ಪರಿಣಾಮ ನೇರವಾಗಿ ಅಕ್ಕಿ ಅಥವಾ ಸಕ್ಕರೆಯ ಬೆಲೆಯಲ್ಲಿ ಮಾತ್ರ ಕಾಣಿಸಿಕೊಳ್ಳುವುದಿಲ್ಲ. ನಾವು ಪ್ರತಿದಿನ ಬಳಸುವ ಅನೇಕ ಆಹಾರ ಪದಾರ್ಥಗಳ ಬೆಲೆಯ ಮೇಲೂ ಅದರ ಪರಿಣಾಮ ಬೀರುವ ಸಾಧ್ಯತೆ ಇದೆ.

ಯುನಿ ಕ್ರೆಡಿಟ್ ವಿಶ್ಲೇಷಣೆಯ ಪ್ರಕಾರ, ತೀವ್ರ ಹವಾಮಾನ ವೈಪರೀತ್ಯ ಉಂಟಾದರೆ ಕೆಲವು ಪ್ರಮುಖ ಕೃಷಿ ಉತ್ಪನ್ನಗಳ ಬೆಲೆ ಶೇ 50ರಿಂದ ಶೇ 100 ಏರಬಹುದು. ಆದರೆ ಇದು ಅತ್ಯಂತ ಪ್ರತಿಕೂಲ ಪರಿಸ್ಥಿತಿಯನ್ನು ಆಧರಿಸಿದ ಆರ್ಥಿಕ ಅಂದಾಜು. ನೈಜ ಪರಿಣಾಮ ಹವಾಮಾನ, ಸರ್ಕಾರಿ ನೀತಿಗಳು, ಧಾನ್ಯ ಸಂಗ್ರಹ ಮತ್ತು ಜಾಗತಿಕ ವ್ಯಾಪಾರದ ಬೆಳವಣಿಗೆಗಳ ಮೇಲೆ ಅವಲಂಬಿತವಾಗಿರುತ್ತದೆ.

ರಾಜಮನೆತನ‌ದಿಂದ ಮಿಡ್‌ನೈಟ್ ಕಲ್ಚರ್‌ವರೆಗೆ.. 'ಹೈದರಾಬಾದಿ ಬಿರಿಯಾನಿ' ಘಮದ ಕಥೆ

ಎಲ್ಲವೂ ಕೆಟ್ಟದ್ದೇ ಆಗುತ್ತದೆಯೇ?

ಎಲ್ ನಿನೊ ಎಂದರೆ ಎಲ್ಲರಿಗೂ ನಷ್ಟವೇ ಎಂಬ ಅರ್ಥವಲ್ಲ. ಕೆಲವು ಪ್ರದೇಶಗಳಲ್ಲಿ ಹವಾಮಾನ ಅನುಕೂಲಕರವಾಗಿದ್ದರೆ ಉತ್ತಮ ಬೆಳೆ ಬರಬಹುದು. ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಏರಿದರೆ ಕೆಲವು ರೈತರಿಗೆ ಹೆಚ್ಚಿನ ಆದಾಯವೂ ದೊರೆಯಬಹುದು.

ಆದರೆ ಅದೇ ಸಮಯದಲ್ಲಿ ಮಳೆ ಆಧಾರಿತ ಕೃಷಿ ಮಾಡುವ ರೈತರು, ಆಹಾರವನ್ನು ಹೆಚ್ಚಾಗಿ ಆಮದು ಮಾಡಿಕೊಳ್ಳುವ ದೇಶಗಳು ಮತ್ತು ಕಡಿಮೆ ಆದಾಯದ ಕುಟುಂಬಗಳು ಹೆಚ್ಚು ಹೊಡೆತ ಅನುಭವಿಸಲಿದೆ.

ಹೀಗಾಗಿ, ಎಲ್ ನಿನೊ ವಿಪತ್ತೆಂದು ನೋಡುವುದೂ ಸರಿಯಲ್ಲ; ಯಾವುದೇ ಪರಿಣಾಮ ಇರುವುದಿಲ್ಲ ಎಂದು ನಿರ್ಲಕ್ಷಿಸುವುದೂ ಸರಿಯಲ್ಲ. ಇದು ಜಾಗತಿಕ ಆಹಾರ ವ್ಯವಸ್ಥೆಯ ಮುಂದೆ ನಿಂತಿರುವ ಒಂದು ಅಪಾಯದ ಮುನ್ನೆಚ್ಚರಿಕೆ. ಅದರ ಪರಿಣಾಮದ ಪ್ರಮಾಣವನ್ನು ಮುಂದಿನ ತಿಂಗಳುಗಳ ಹವಾಮಾನ ಮತ್ತು ಸರ್ಕಾರಗಳ ಕ್ರಮಗಳು ನಿರ್ಧರಿಸಲಿವೆ.

ಆಧಾರ: ದಿ ಗಾರ್ಡಿಯನ್ ಇಂಟರ್‌ನ್ಯಾಷನಲ್, , ಭಾರತ ಹವಾಮಾನ ಇಲಾಖೆ, ಗೋಲ್ಡ್‌ಮನ್ ಸ್ಯಾಕ್ಸ್ ಸಂಶೋಧನಾ ವರದಿ

ಪ್ರಶಸ್ತಿಗಾಗಿ ಓಡೋಡಿ ಬರ್ತಾರೆ?: ಮೋದಿ ಹಾಗೂ ಜಾಗತಿಕ ಪ್ರಶಸ್ತಿಗಳ ಸುತ್ತ ವಿವಾದ
Dailyhunt
Disclaimer: This content has not been generated, created or edited by Dailyhunt. Publisher: Prajavani