'ಹವಾಮಾನ ವೈಪರೀತ್ಯ, ಮಳೆ ಅನಿಶ್ಚತತೆಯ ಈ ಕಾಲಘಟ್ಟದಲ್ಲಿ ಬೆಳೆಯನ್ನಷ್ಟೇ ನಂಬಿ ಜೀವನ ನಡೆಸುವುದು ಕಷ್ಟ. ಜತೆಗೆ ಉಪ ಕಸುಬುಗಳು ಅನಿವಾರ್ಯ. ಏಕೆ ಗೊತ್ತಾ?, ಬೆಳೆ ಕೈಕೊಟ್ಟರೂ, ಉಪ ಕಸುಬುಗಳು ಬದುಕು ನಡೆಸುತ್ತವೆ..!
ಕಳೆದ ವಾರ 'ಅನ್ನದ ಬಟ್ಟಲು' ಅಂಕಣದಲ್ಲಿ ಪ್ರಕಟವಾದ 'ಉಪ ಕಸುಬುಗಳೆಂಬ ಬರ ನಿರೋಧಕ ಜಾಣ್ಮೆ' ಲೇಖನ ಓದಿದ ಹಲವರು ವ್ಯಕ್ತಪಡಿಸಿದ ಸಾಮಾನ್ಯ ಅಭಿಪ್ರಾಯ ಇದು. ಇದರ ಜತೆಗೆ, ಕೆಲವರು ಹೊಸ ರೂಪದ ವಿಭಿನ್ನ ಉಪ ಕಸುಬುಗಳನ್ನು ಅಳವಡಿಸಿಕೊಂಡಿರುವ ವಿಚಾರ ಹಂಚಿಕೊಂಡರು. ಅದರಲ್ಲಿ ಆಸಕ್ತಿದಾಯಕವಾಗಿರುವ ಕೆಲವನ್ನು ಇಲ್ಲಿ ಹಂಚಿಕೊಳ್ಳುತ್ತಿರುವೆ.
ಅನ್ನದ ಬಟ್ಟಲು: ಉಪ ಕಸುಬುಗಳೆಂಬ ಬರ ನಿರೋಧಕ ಜಾಣ್ಮೆಜೈವಿಕ ಪೋಷಕಾಂಶ ಮಾರಾಟ..
ಮೂರು ವರ್ಷಗಳ ಹಿಂದಿನ ಮಾತು. ಕಡೂರು ತಾಲ್ಲೂಕಿನ ಬಿಸ್ಲೇಹಳ್ಳಿ, ಲಕ್ಷ್ಮಿಪುರ ಸುತ್ತಮುತ್ತಲಿನ ಕೆಲವು ರೈತರು ನೈಸರ್ಗಿಕ ಕೃಷಿ ಪದ್ಧತಿ ಅಳವಡಿಕೆಗೆ ಮುಂದಾದರು. ಆಗ ಅವರಿಗೆ ಈ ಕೃಷಿ ಪದ್ಧತಿಗೆ ಅಗತ್ಯವಾಗಿದ್ದ ಜೀವಾಮೃತ, ಘನಜೀವಾಮೃತ, ಪಂಚಗವ್ಯದಂತಹ ಜೈವಿಕ ಒಳಸುರಿಗಳ ಕೊರತೆ ಎದುರಾಗಿತ್ತು. ಕಾರಣ, ಇವರಲ್ಲಿ ಜಾನುವಾರುಗಳ ಕೊರತೆ.
ಇದನ್ನು ಅರಿತ ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆ (ಭೂಮಿ ಸಂಸ್ಥೆ), ನಬಾರ್ಡ್‌ನ 'ಜೀವಾ ನೈಸರ್ಗಿಕ ಕೃಷಿ ಯೋಜನೆ'ಯಡಿ, ಈ ರೈತರಿಗೆ ಜೀವಾಮೃತ, ಘನಜೀವಾಮೃತದಂತಹ ಜೈವಿಕ ಪೋಷಕಾಂಶಗಳ ತಯಾರಿಕೆ ಕುರಿತು ತರಬೇತಿ ನೀಡಿದ್ದಲ್ಲದೇ, ಪಶು ಸಂಗೋಪನೆಗೆ ಪ್ರೋತ್ಸಾಹಿಸಿತು. ಇದರಿಂದ ಉತ್ತೇಜನ ಪಡೆದ ಕೆಲವರು ಜಾನುವಾರುಗಳನ್ನು ಖರೀದಿಸಿದರು. ಜೀವಾಮೃತ, ಘನಜೀವಾಮೃತ ತಯಾರಿಸಿ ಕೊಂಡರು. ಆದರೆ, ಜಾನುವಾರು ಇಲ್ಲದವರಿಗೆ ಪುನಃ ಜೈವಿಕ ಒಳಸುರಿಗಳ ಕೊರತೆ ಎದುರಾಯಿತು. ಆಗ, ದ್ರವರೂಪಿ ಪೋಷಕಾಂಶಗಳನ್ನು ತಯಾರಿಸುತ್ತಿದ್ದ ರೈತರು, ಅವುಗಳ ಕೊರತೆ ಎದುರಿಸುತ್ತಿದ್ದ ರೈತರಿಗೆ ಲೀಟರ್ / ಕೆಜಿಗೆ ಇಂತಿಷ್ಟು ಬೆಲೆ ನಿಗದಿಪಡಿಸಿ (ಲೀಟರ್‌ಗೆ ₹10ರಂತೆ) ಪೂರೈಕೆ ಮಾಡಲು ಶುರು ಮಾಡಿದರು.

ರೈತರು ಉತ್ಪನ್ನಗಳನ್ನು ಮಾರಾಟ ಮಾಡುವ ಜೈವಿಕ ಸಂಪನ್ಮೂಲ ಕೇಂದ್ರ.
ಹೀಗೆ ರೈತರ ನಡುವೆ ಸಣ್ಣದಾಗಿ ಆರಂಭವಾದ ಜೈವಿಕ ಪೋಷಕಾಂಶಗಳ ಕೊಡು-ಕೊಳ್ಳುವಿಕೆಗೆ, ಮೂರು ವರ್ಷಗಳ ನಂತರ ಸಣ್ಣದಾದ ಮಾರುಕಟ್ಟೆ ರೂಪ ಪಡೆದುಕೊಂಡಿದೆ. ಇದೇ ರೈತರು, ಭೂಮಿ ಸಂಸ್ಥೆಯ ಮಾರ್ಗದರ್ಶನದಲ್ಲಿ ಲಕ್ಷ್ಮೀಪುರದಲ್ಲಿ ಆರಂಭಿಸಿರುವ 'ಜೈವಿಕ ಸಂಪನ್ಮೂಲ ಕೇಂದ್ರ'ದಲ್ಲಿ ಜೀವಾಮೃತ, ಘನಜೀವಾಮೃತ, ಗೋಕೃಪಾಮೃತದ ಜೈವಿಕ ಪೋಷಕಾಂಶಗಳು ಮತ್ತು ಬೆಳೆ ಪ್ರಚೋದಕಗಳು, ರೋಗ ನಿವಾರಕ, ಕೀಟ ನಿಯಂತ್ರಕ ಕಷಾಯಗಳನ್ನು ಶೀಶೆಗಳಲ್ಲಿಟ್ಟು ಮಾರಾಟ ಮಾಡುತ್ತಿದ್ದಾರೆ.
ಈ ಒಳಸುರಿಗಳ ಮಾರುಕಟ್ಟೆ ವಿಸ್ತರಣೆಯಾಗುತ್ತಿದ್ದಂತೆ, ಅದೇ ಕೇಂದ್ರದಲ್ಲಿ ನೈಸರ್ಗಿಕ ಕೃಷಿಯಲ್ಲಿ ಬೆಳೆದ ಆಹಾರ ಉತ್ಪನ್ನಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ. ನಿಮಗೆ ನೆನಪಿರಬಹುದು, ಹಿಂದಿನ 'ಅನ್ನದ ಬಟ್ಟಲು' ಸಂಚಿಕೆಯೊಂದರಲ್ಲಿ ಇದೇ ಊರಿನ ರೈತರು 'ಪಿಎಂಡಿಎಸ್' ವಿಧಾನದಲ್ಲಿ ಅಕ್ಕಡಿ ಸಾಲಿನ ಬೆಳೆಗಳನ್ನು ಬೆಳೆದಿದ್ದನ್ನು ಪ್ರಸ್ತಾಪಿಸಿದ್ದೆ. ಆ ವಿಧಾನದಲ್ಲಿ ಬೆಳೆದ ಬೇಳೆ-ಕಾಳು, ಆಹಾರ ಧಾನ್ಯಗಳು, ಮೇವಿನ ಕಟಿಂಗ್ಸ್‌ಗಳನ್ನು ಇಲ್ಲಿ ಮಾರುತ್ತಿದ್ದಾರೆ. ಅಷ್ಟೇ ಅಲ್ಲ, 'ಜೀವಾ' ಯೋಜನೆಯಡಿ ವಿತರಿಸಿದ ನಾಟಿ ಕೋಳಿಗಳಿಂದ ಉತ್ಪಾದನೆಯಾದ ಮೊಟ್ಟೆ, ನಾಟಿ ಹಸುವಿನ ಬೆಣ್ಣೆ, ತುಪ್ಪ ಕೂಡ ಮಾರಾಟ ಮಾಡುತ್ತಿದ್ದಾರೆ. ಈ ಉತ್ಪನ್ನಗಳನ್ನು ಸುತ್ತ-ಮುತ್ತಲಿನ ಹಳ್ಳಿಗಳ ರೈತರೇ ಖರೀದಿಸುತ್ತಿದ್ದಾರೆ.
ಅನ್ನದ ಬಟ್ಟಲು: 'ಪಿಎಂಡಿಎಸ್' ಕನಿಷ್ಠ ವೆಚ್ಚದಲ್ಲಿ ಗರಿಷ್ಠ ಗೊಬ್ಬರಸಣ್ಣದಾಗಿ ರೈತರ ನಡುವೆ ಆರಂಭವಾದ 'ಕೊಡು-ಕೊಳ್ಳುವಿಕೆ'ಯ ಪ್ರಕ್ರಿಯೆ ಈಗ ರೈತ ಸಮುದಾಯಕ್ಕೆ ಒಂದು ಉಪ ಆದಾಯ ನೀಡುವ ಹಂತಕ್ಕೆ ವಿಸ್ತರಣೆಯಾಗಿದೆ. ರೈತ ಸಮುದಾಯ ಸಂಘಟಿತರಾದರೆ, ಸ್ಥಳೀಯ ಸಂಪನ್ಮೂಲಗಳನ್ನೇ ಬಳಸಿಕೊಂಡು ಇಂಥದ್ದೊಂದು ಆದಾಯ ಕೊಡುವ ಉಪಕಸುಬು ಆರಂಭಿಸಬಹುದು ಎಂಬುದಕ್ಕೆ ಇದೊಂದು ಸೂಕ್ತ ಉದಾಹರಣೆ.
ಬದುಕು ಬಲವರ್ಧಿಸಿದ 'ಅಣಬೆ ಹಪ್ಪಳ'
ಕೋವಿಡ್ ಬಿಕ್ಕಟ್ಟಿನ ನಂತರ ಅನಿವಾರ್ಯ ಕಾರಣಗಳಿಂದ ಬೆಂಗಳೂರು ಬಿಟ್ಟು ಕೃಷಿ ಮಾಡುವುದಕ್ಕಾಗಿ ಕುಟುಂಬ ಸಹಿತ ಹಳ್ಳಿಗೆ ವಾಪಾಸಾದ ಹಾಗಲವಾಡಿಯ ಹಳಕಟ್ಟದ ಗಂಗಲಕ್ಷ್ಮಿ ಊರಿಗೆ ಸಮೀಪದಲ್ಲಿದ್ದ ತಮ್ಮ ತೋಟದಲ್ಲಿ ನೆಲೆಯೂರಿದರು. ಅವರದ್ದು ಎರಡೂವರೆ ಎಕರೆಯ ತೆಂಗು- ಅಡಿಕೆ ತೋಟ. ಪತಿ ಕ್ಯಾಬ್ ಚಾಲಕ. ಇವರು ತೋಟಕ್ಕೆ ಮರಳಿದಾಗ ಎಲ್ಲವೂ ಫಸಲು ಬಿಡುವ ಹಂತದಲ್ಲಿದ್ದವು. ಫಸಲು ಬಿಡುವವರೆಗೂ ಏನಾದರೂ ಉದ್ಯೋಗ ಮಾಡಬೇಕಲ್ಲ. ಅದಕ್ಕೆ, ಬೆಂಗಳೂರಿನಲ್ಲಿದ್ದಾಗ ಕಲಿತಿದ್ದ ಅಣಬೆ ಕೃಷಿ ಉದ್ಯಮವನ್ನೇ ತೋಟದಲ್ಲಿ ಶುರು ಮಾಡಿದರು. ತೋಟದಲ್ಲಿ ಶೆಡ್ ನಿರ್ಮಿಸಿ, ಆಯಿಸ್ಟರ್ ಅಣಬೆ (ಮಶ್ರೂಮ್) ಬೆಳೆಯಲು ಆರಂಭಿಸಿದರು. ಒಂದು ಕಡೆ ತೋಟದ ಕೆಲಸ ನಿರ್ವಹಿಸುತ್ತಾ, ಮತ್ತೊಂದೆಡೆ ಅಣಬೆ ಉತ್ಪಾದನೆ ಮುಂದುವರಿಸಿದರು.
ಗಂಗಲಕ್ಷ್ಮಿ ಅವರು ಬೆಂಗಳೂರಿನಲ್ಲಿದ್ದಾಗ ಹುರುಳಿ, ಅಕ್ಕಿ, ಮಸಾಲ, ಪಾಲಕ್ ಸೇರಿದಂತೆ ಬಗೆ ಬಗೆಯ ಹಪ್ಪಳ ಮಾಡಿ ಮಾರಾಟ ಮಾಡುತ್ತಿದ್ದರು. ಎಲ್ಲ ಹಪ್ಪಳಕ್ಕೂ ಇವರ ಸ್ವಂತದ್ದೇ ರೆಸಿಪಿ. ಇದೇ ರೆಸಿಪಿ ಪಟ್ಟಿಗೆ ಅಣಬೆಯನ್ನೂ ಸೇರಿಸಿಕೊಂಡು 'ಅಣಬೆ ಹಪ್ಪಳ' ಎಂಬ ಹೊಸ ರೀತಿಯ ಉತ್ಪನ್ನ ತಯಾರಿಸಲು ಶುರು ಮಾಡಿದರು. ರುಚಿಯ ಜತೆಗೆ ಉತ್ತಮ ಪೌಷ್ಟಿಕಾಂಶ ಹೊಂದಿದ್ದ ಅಣಬೆ ಹಪ್ಪಳಕ್ಕೆ ಸ್ಥಳೀಯವಾಗಿ ಮಾರುಕಟ್ಟೆ ಸಿಕ್ಕಿತು. ಬೆಂಗಳೂರಿನಲ್ಲಿರುವ ಮಂಗಳೂರು ಸ್ಟೋರ್ಸ್ ಸೇರಿದಂತೆ ಕೆಲವು ಅಂಗಡಿಗಳಿಗೆ ಇವರು ಈ ಹಪ್ಪಳಗಳನ್ನು ಪೂರೈಕೆ ಮಾಡುತ್ತಾರೆ.
'ತಿಂಗಳಿಗೆ 300 ಕೆಜಿ ಅಣಬೆ ಬೆಳೆಯುತ್ತೇನೆ. ಅಣಬೆಯನ್ನು ಒಣಗಿಸಿ ಪುಡಿ ಪೌಡರ್ ಮಾಡಿ ಮಾರಾಟ ಮಾಡುತ್ತೇನೆ. ಅಣಬೆ ಉಪ್ಪಿನಕಾಯಿ ತಯಾರಿಸಿ ಮಾರಾಟ ಮಾಡುತ್ತೇನೆ. ಜತೆಗೆ ಕರಿಬೇವು, ಶೇಂಗಾ, ನುಗ್ಗೆ ಸೊಪ್ಪಿನ ಚಟ್ನಿಪುಡಿಗಳೂ ಇವರ ಮೌಲ್ಯವರ್ಧಿತ ಉತ್ಪನ್ನಗಳ ಪಟ್ಟಿಯಲ್ಲಿವೆ. ಎಲ್ಲವೂ ಸ್ಥಳೀಯವಾಗಿಯೇ ಮಾರುಕಟ್ಟೆಯಾಗುತ್ತದೆ. ಉತ್ತಮ ಮಾರುಕಟ್ಟೆ ಇದೆ. ಬೆಂಗಳೂರಿನಲ್ಲಿನ ಕೆಲವೊಂದು ಅಂಗಡಿಗಳಿಗೂ ಉತ್ಪನ್ನಗಳನ್ನು ಪೂರೈಸುತ್ತೇನೆ. ವಹಿವಾಟು ಪರವಾಗಿಲ್ಲ' ಎನ್ನುತ್ತಾರೆ ಗಂಗಲಕ್ಷ್ಮಿ.

ಆಯಿಸ್ಟರ್ ಅಣಬೆಯೊಂದಿಗೆ ಗಂಗಲಕ್ಷ್ಮಿ
ತಿಂಗಳಿಗೆ ವಿವಿಧ ರೀತಿಯ ಸುಮಾರು 20 ಸಾವಿರ ಹಪ್ಪಳಗಳು ಮಾರಾಟವಾಗುತ್ತವೆಯಂತೆ. 'ತೋಟದ ಕೆಲಸದ ಜತೆಗೆ ಈ ಉಪಕಸುಬನ್ನೂ ಮುಂದುವರಿಸಿದ್ದೇನೆ. ಮನೆಯ ಖರ್ಚಿನ ಜತೆಗೆ ಇಬ್ಬರು ಮಕ್ಕಳ ಶೈಕ್ಷಣಿಕ ವೆಚ್ಚ ಭರಿಸಲು ಈ ಕಿರು ಉದ್ಯಮ ನೆರವಾಗಿದೆ' ಎನ್ನುತ್ತಾರೆ ಗಂಗಲಕ್ಷ್ಮಿ.
ಆರೇಳು ವರ್ಷಗಳಿಂದ ಕೃಷಿಯೊಂದಿಗೆ ನಡೆಸುತ್ತಿರುವ ಈ ಉಪಕಸುಬಿಗೆ ಅಗತ್ಯವಾದ ಕಚ್ಚಾ ವಸ್ತುಗಳನ್ನು ಸ್ಥಳೀಯವಾಗಿ ಖರೀದಿಸುತ್ತಾರೆ. ಈ ಉದ್ಯಮ ಒಂದಷ್ಟು ಸುತ್ತಲಿನ ಜನರಿಗೆ ಉದ್ಯೋಗವನ್ನೂ ನೀಡಿದೆ. ಈಗ ಎರಡು ವರ್ಷಗಳಿಂದ ತೋಟದಲ್ಲಿ ತೆಂಗು ಫಸಲು ಬಿಡಲು ಆರಂಭವಾಗಿದೆ. ಆದರೆ, ಈ ವರ್ಷ ಮಳೆ ಕಡಿಮೆ. ತೆಂಗು ಫಸಲು ಕಡಿಮೆ ಆಗಬಹುದೇನೋ, ಆದರೆ, ಉಪ ಕಸುಬು ನೆರವಿಗೆ ಬರುತ್ತದೆ ಎಂಬ ವಿಶ್ವಾಸ ಅವರದ್ದು.
(ಗಂಗಲಕ್ದ್ಮಿಯವರ ಹಪ್ಪಳ ಮತ್ತಿತರ ಉತ್ಪನ್ನಗಳಿಗಾಗಿ +91 99163 32925 ಸಂಪರ್ಕಿಸಬಹುದು)
ಅನ್ನದ ಬಟ್ಟಲು: ಹಣಕೊಡುವ ಶ್ರೀಗಂಧಕ್ಕೆ 'ಶಕ್ತಿ' ನೀಡುವ ಸಂಗಾತಿಗಳುಅನ್ನದ ಬಟ್ಟಲು: ಕೆಂಪು ಸುಂದರಿ ಈ ಬಾರ್ಬಡೋಸ್ ಚೆರ್ರಿ !ಕೈ ಹಿಡಿಯುವ 'ಏರು ಮಡಿ' ತರಕಾರಿ
ನೆಲದ ಮೇಲೆ ನಾಲ್ಕು ಅಡಿ ಅಗಲ, 20 ಅಡಿ ಉದ್ದ, ಮುಕ್ಕಾಲು ಅಡಿ ಎತ್ತರ, ಸುತ್ತ ನಾಲ್ಕು ಕಡೆಗೆ ಕಲ್ಲು ಚಪ್ಪಡಿ ಗೋಡೆ. ಕೆಂಪು ಮಣ್ಣು, ಎರೆಗೊಬ್ಬರ/ ತಿಪ್ಪೆಗೊಬ್ಬರ ಭರ್ತಿ ಮಾಡಿದರೆ ತರಕಾರಿ ಬೆಳೆಯಲು ಏರು ಮಡಿ ಸಿದ್ದ. ಒಂದು ಮಡಿಯಲ್ಲಿ ಮೂರು ತರಹದ ತರಕಾರಿಗಳ ನಾಟಿ. ನೆಲ ಮುಚ್ಚುವ ಸೊಪ್ಪು, ನೆಲದಡಿ ಬೆಳೆಯುವ ಗೆಡ್ಡೆ ಗೆಣಸು, ಹಬ್ಬುವ ಬಳ್ಳಿ ತರಕಾರಿ. ಬೆಳೆದ ತರಕಾರಿ ಮನೆ ಬಳಕೆಗೆ, ಹೆಚ್ಚಾಗಿದ್ದು ಮಾರುಕಟ್ಟೆಗೆ. ಇದು ವರ್ಷಪೂರ್ತಿ ತರಕಾರಿ ಕೊಡುವ ತಿಪಟೂರಿನ 'ಅಕ್ಷಯ ಕಲ್ಪ' ಸಂಸ್ಥೆಯ ಮಾದರಿ. ದಸರಿಘಟ್ಟದಲ್ಲಿರುವ ತನ್ನ ಫಾರಂನಲ್ಲಿ ಇದನ್ನು ಅಳವಡಿಸಿದೆ, ಜನರಿಗೂ ಪರಿಚಯಿಸುತ್ತಿದೆ. ಇದು ಹಳೆಯ ವಿಧಾನವಾದರೂ, ಸಂಸ್ಥೆಯು ಇದನ್ನು ಬ್ಯುಸಿನೆಸ್ ಮಾಡೆಲ್ ಆಗಿ ರೂಪಿಸಿರುವ ಪರಿ ಚೆನ್ನಾಗಿದೆ. ಒಬ್ಬ ಮಹಿಳೆ ಸುಲಭವಾಗಿ ನಿರ್ವಹಣೆ ಮಾಡಿ ಆರ್ಥಿಕವಾಗಿ ಸಬಲರಾಗುವಂತೆ ವಿನ್ಯಾಸಗೊಳಿಸಿದೆ..
ಈ ಮಾದರಿಯಲ್ಲಿ 35 ಗುಂಟೆಯಲ್ಲಿ 28 ಏರು ಮಡಿಗಳಿವೆ. ಒಂದು ಮಡಿಯಲ್ಲಿ 4 ರಿಂದ 5 ವಿಧದ ತರಕಾರಿಗಳನ್ನು ಬೆಳೆದಿದ್ದಾರೆ. ಇದರಲ್ಲಿ 30 ದಿನ, 90 ದಿನಗಳಿಗೆ ಬರುವ ತರಕಾರಿಗಳಿವೆ. ತರಕಾರಿ ಕೃಷಿಗೆ ರಸಗೊಬ್ಬರ ಹಾಕಿಲ್ಲ. ಕ್ರಿಮಿನಾಶಕ ಹೊಡೆದಿಲ್ಲ. ಖರ್ಚು ಕಡಿಮೆ ಮಾಡಲು ಸ್ಥಳೀಯ ನೈಸರ್ಗಿಕ ಸಂಪನ್ಮೂಲ ಬಳಸಿದ್ದಾರೆ. ಸ್ಪ್ರಿಂಕ್ಲರ್ ಮೂಲಕ ನೀರು ಕೊಟ್ಟು, ಪ್ರತಿ ವಾರ ಎರಡು ಬೆಡ್‌ಗೆ ನೀರು ಪೂರೈಕೆ ಮಾಡುತ್ತಾರೆ.
'ಒಂದು ತಿಂಗಳಿಗೆ ಸರಾಸರಿ 1,200 ಕೆ.ಜಿ ತರಕಾರಿ ಕೊಯ್ಲು ಮಾಡುತ್ತಿದ್ದಾರೆ. ಒಂದೊಂದು ತರಕಾರಿ ಒಂದೊಂದು ತೂಕ ಇರುತ್ತದೆ. ಹಾಗೆ ಅಂದಾಜಿಸುವುದಾದರೆ, ನಾಲ್ಕು ಅಡಿ ಅಗಲ 20 ಅಡಿ ಉದ್ದದ ಒಂದು ಏರು ಮಡಿಯಿಂದ ಒಂದು ತಿಂಗಳಿಗೆ 50 ಕೆ.ಜಿ ಕೊಯ್ಲು ಮಾಡಬಹುದು' ಎನ್ನುತ್ತಾರೆ 'ಅಕ್ಷಯ ಕಲ್ಪ'ದ ರಘುರಾಂ.
'ಗುಂಟೆಗಳಲ್ಲಿ ಕೃಷಿ ಮಾಡುವವರಿಗೆ, ಇದು ಪಕ್ಕಾ ಆದಾಯ ತರುವ ಮಾದರಿ. ಒಬ್ಬ ರೈತರು/ಮಹಿಳೆ ಮೂರು ಮಡಿ ಮಾಡಿಕೊಂಡರೆ, ಒಂದು ತಿಂಗಳಿಗೆ 150 ಕೆಜಿ ತರಕಾರಿ ಗ್ಯಾರಂಟಿ ಸಿಗುತ್ತದೆ. ಜಾಗದ ಲಭ್ಯತೆ ನೋಡಿಕೊಂಡು ಏರು ಮಡಿ ಮಾಡಿಕೊಳ್ಳಬಹುದು. ಸುತ್ತ ತಡೆಗೋಡೆಗೆ ವ್ಯರ್ಥವಾದ ಹೆಂಚುಗಳನ್ನು ಬಳಸಬಹುದು' ಎನ್ನುತ್ತಾರೆ ಅವರು.
ಅನ್ನದ ಬಟ್ಟಲು: ಮಣ್ಣು - ನೀರಿನ ಆಪ್ತರಕ್ಷಕ ಲಾವಂಚಅನ್ನದ ಬಟ್ಟಲು: ಹಲಸಿನ ಕಾಯಿ ಹಿಟ್ಟಿನಲ್ಲಿದೆ 'ಮಧುಮೇಹ' ನಿಯಂತ್ರಣದ ಗುಟ್ಟು'ಮಡಿ ಮಧ್ಯದಲ್ಲಿ ಹೀರೇಕಾಯಿ, ತುಪ್ಪೀರೆಕಾಯಿಯಂತಹ ಬಳ್ಳಿ ತರಕಾರಿ ಹಾಕಬೇಕು. ಅವು ಮೇಲೇರುತ್ತವೆ. ಸ್ಬಲ್ಪ ಕಡ್ಡಿಗಳನ್ನು ಬಳಸಿ ಚಪ್ಪರ ಮಾಡಿದರೆ, ಅದರ ಮೇಲೆ ಹರಡಿಕೊಳ್ಳುತ್ತವೆ. ಈ ಬಳ್ಳಿ ತರಕಾರಿ ಕೆಳಗೆ ಮಡಿಯ ಗಡಿಯಲ್ಲಿ ಗೋರಿಕಾಯಿ (ಚವಳಿ), ಬೆಂಡೆಕಾಯಿ, ಬದನೆಕಾಯಿ, ಮೆಣಸಿನ ಕಾಯಿ ಬೆಳೆಯಬಹುದು. ಇದರ ಕೆಳಗಡೆ ಸೊಪ್ಪುಗಳನ್ನು ಹಾಕಬಹುದು. ಸೊಪ್ಪಿನ ಕೆಳ ಭಾಗ ಅಂದರೆ ನೆಲದಡಿಯಲ್ಲಿ ಅರಿಸಿಣ, ಶುಂಠಿ, ಸಿಹಿ ಗೆಣಸು, ಬೀಟ್‌ರೂಟ್, ಈರುಳ್ಳಿ, ಬೆಳ್ಳುಳ್ಳಿ ಹಾಕಬಹುದು. ಈಗ ನಾಲ್ಕು ಪದರಗಳಲ್ಲಿ ತರಕಾರಿಗಳನ್ನು ಬೆಳೆದಂತಾಯಿತು. ವಾರಕ್ಕೆ ಒಮ್ಮೆ ಒಂದು ಗಿಡಕ್ಕೆ ನೀರು ಕೊಟ್ಟರೆ ಎಲ್ಲವುದಕ್ಕೂ ತಲುಪುತ್ತದೆ. ಇದಕ್ಕೆ ಸ್ಬಲ್ಪ ಶ್ರಮ ಬೇಕು. ಆದರೆ ನಿರ್ವಹಣೆ ಸುಲಭ. ಫಸಲು ನಿಶ್ಚಿತ' ಎನ್ನುತ್ತಾರೆ ಏರು ಮಡಿಯಲ್ಲಿ ತರಕಾರಿ ಬೆಳೆಯುತ್ತಿರುವ ಕೊಪ್ಪಳದ ಕೃಷಿಕ ಮಿತ್ರ ಆನಂದತೀರ್ಥ ಪ್ಯಾಟಿ.
ಇಂಥ ಹತ್ತು ಏರು ಮಡಿಗಳನ್ನು ಮಾಡಿಕೊಂಡರೆ ಮನೆಗೆ ತರಹೇವಾರಿ ತರಕಾರಿಯೂ ಸಿಗುತ್ತದೆ. ಹೆಚ್ಚಾದ್ದನ್ನು ಮಾರಾಟ ಮಾಡಿ ಸೀಮಿತವಾದ ಆದಾಯ ಗಳಿಸಬಹುದು. ತರಕಾರಿ ಬೆಳೆಯುವುದಕ್ಕೆ ಬೇಕಾದ ಪಂಚಗವ್ಯ, ಜೈವಿಕ ಕೀಟ ವಿಕರ್ಷಕ ಕಷಾಯಗಳ ಕುರಿತು ತಜ್ಞರಿಂದ ಮಾಹಿತಿ ಕೇಳಿ ಪಡೆಯಬಹುದು.
'ಅಕ್ಷಯ ಕಲ್ಪ' ಸಂಸ್ಥೆ - ಈ ಏರುಮಡಿ ತರಕಾರಿ ಬೆಳೆಸುವ ಕುರಿತು ತರಬೇತಿಯನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗೆ : 6366849391 ಸಂಪರ್ಕಿಸಬಹುದು.
ಕೊನೆಯದಾಗಿ…
ಕೃಷಿಯ ಜತೆ ಉಪಕಸುಬುಗಳು ಹೊಸ ರೂಪದಲ್ಲಿ ಬೆಸೆಯುತ್ತಾ ಸಾಗುತ್ತಿವೆ. ಮೂಡಿಗೆರೆ ಸಮೀಪದ ಫಲ್ಗುಣಿಯ ಅರಣ್ಯ ಇಲಾಖೆಯ ನರ್ಸರಿಯಲ್ಲಿ ಕೆಲಸ ಮಾಡುವ ಕಂಠೇಶ್ ಮೂರ್ತಿ, ಎರಡು ದಶಕಗಳ ಹಿಂದೆ ಹಲಸಿನ ಮರಗಳ ನೆರಳಲ್ಲಿ ಆರಂಭಿಸಿದ ಎರೆಗೊಬ್ಬರ ಉತ್ಪಾದನೆ ಇಂದು ಅವರ ಮಕ್ಕಳ ಶಿಕ್ಷಣಕ್ಕೆ ನೆರವಾಗಿದೆ. ಉದ್ಯೋಗವಿಲ್ಲದೇ ಕೂಲಿಗೆ ಹೋಗುತ್ತಿದ್ದ ಪಾಂಡವಪುರ ತಾಲ್ಲೂಕಿನ ಹಳ್ಳಿಯೊಂದರ ದರ್ಶನ್ ಮತ್ತು ಗಿರೀಶ್ ಎಂಬ ಯುವಕರು ಕಾಲಿಗೆ ಉಪಕರಣ ಕಟ್ಟಿಕೊಂಡು, ತೆಂಗಿನ ಮರ ಏರಿ ಕಾಯಿ ಕೀಳುವುದನ್ನೇ ವೃತ್ತಿಪರ ಕೆಲಸವನ್ನಾಗಿಸಿಕೊಂಡಿದ್ದಾರೆ. ಆರೇಳನೆ ಕ್ಲಾಸ್ ಓದಿರುವ ಈ ಯುವಕರು, ಸಾಮಾಜಿಕ ಜಾಲತಾಣವನ್ನೇ 'ಸಂಪರ್ಕ' ಸೇತುವೆಯಾಗಿ ಮಾಡಿಕೊಂಡಿದ್ದಾರೆ. ಜಮೀನಿಲ್ಲದಿದ್ದರೂ ಕೃಷಿ ಸಂಬಂಧಿ ಕಸುಬಿನಲ್ಲೇ ಬದುಕುತ್ತಿದ್ದಾರೆ. ನವೀನ್ ಅಮ್ಮಿಕೇರಿ ಎಂಬ ಯುವಕ ನುಗ್ಗೆ ಬೆಳೆದು ಮಾರುಕಟ್ಟೆ ಸಿಗದಿದ್ದಾಗ, ಆ ನುಗ್ಗೆಯ ಸೊಪ್ಪನ್ನೇ ಪೌಡರ್ ಮಾಡಿ, ಹೊಸ ಸ್ಟಾರ್ಟ್ ಅಪ್ ಮೂಲಕ ಮಾರಾಟ ಆರಂಭಿಸಿದ್ದಾರೆ ಎಂದು ಮಿತ್ರ ಸ್ವರೂಪಾನಂದ ಕೊಟ್ಟೂರು ನೆನಪಿಸಿಕೊಳ್ಳುತ್ತಾರೆ.
ರಾಜ್ಯದಲ್ಲಿರುವ ಅದೆಷ್ಟೋ ಸಣ್ಣ ರೈತರು, ತರಕಾರಿ, ಹೂವು, ಹಣ್ಣಿನ ಬೀಜಗಳನ್ನು ಉತ್ಪಾದಿಸುತ್ತಾ, ಸಂಗ್ರಹಿಸುತ್ತಾ, ಅವುಗಳನ್ನು ಸ್ಥಳೀಯವಾಗಿ ಮಾರುಕಟ್ಟೆ ಮಾಡುತ್ತಾ, ಜೀವನಕ್ಕೆ ಆರ್ಥಿಕ ಬೆಂಬಲ ತುಂಬುತ್ತಿದ್ದಾರೆ. ಹುಡುಕುತ್ತಾ ಹೊರಟರೆ, ನಮ್ಮ ಅಕ್ಕಪಕ್ಕದಲ್ಲೇ ಇಂಥ ನೂರಾರು ಹೊಸ ರೂಪದ ಉಪಕಸುಬುಗಳು ಕೃಷಿಯೊಂದಿಗೆ ಬೆಸೆದುಕೊಂಡಿರುವುದು ಕಾಣುತ್ತದೆ.
ನಿಮಗೂ ಇಂಥ ಹೊಸ ರೂಪದ ಉಪ ಕಸುಬುಗಳು ಕಂಡರೆ, ಫೋಟೊ ಸಹಿತ ಬರೆದು ತಿಳಿಸುತ್ತೀರಲ್ಲವಾ?ಅನ್ನದ ಬಟ್ಟಲು | ಬರದ ಭೀತಿ ಬಿಡಿ, ನೇರಳೆ ಹಣ್ಣಿನ ಮೌಲ್ಯವರ್ಧನೆಯತ್ತ ಗಮನವಿಡಿಅನ್ನದ ಬಟ್ಟಲು: ಸಮೃದ್ಧ ಹುಣಸೆ ಇಳುವರಿಗೆ ನೀರು-ಗೊಬ್ಬರವೇ ಜೀವಾಳಅನ್ನದ ಬಟ್ಟಲು: ದೇವೇಂದ್ರರ 'ದೇಸಿ ಭತ್ತದ ತಳಿ' ಲೋಕಅನ್ನದ ಬಟ್ಟಲು: ಅಜೋಲಾ, ಭತ್ತದ ಗದ್ದೆಗಳ ಕವಚ
